ಸಿರಿಗೇರಿ : ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಲಾಪ್ರದರ್ಶನ ಬೆಳೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಾಯಧನವನ್ನು ನೀಡುವುದರ ಮೂಲಕ ಮಕ್ಕಳ ಅಭಿನಯ ಕಲಾ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ .ನಾಗರಾಜ ತಿಳಿಸಿದರು.
ಅವರು ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಲಕ್ಷ್ಮಿ ನಗರ ಕ್ಯಾಂಪ್ ಮುದ್ದಾಟನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ಜಾಗರಣೆಯ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಮಂಗಳವಾರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಂತರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್ ಎಂ ನಾಗರಾಜ ಸ್ವಾಮಿ ಮಾತನಾಡಿ ಇಂದಿನ ಯುವ ಪೀಳಿಗೆಯ ಮಕ್ಕಳಲ್ಲಿ ಇಂತಹ ಸುಗಮ ಸಂಗೀತ, ಡೊಳ್ಳು ಕುಣಿತ, ಸಮೂಹ, ನೃತ್ಯ, ರಂಗಗೀತೆ, ಕಿರು ನಾಟಕ, ಹಾಸ್ಯ, ಪೌರಾಣಿಕಬಯಲಾಟ, ನಾಟಕ, ವೀರಗಾಸೆ, ಯಕ್ಷಗಾನ, ಹೀಗೆ ಇಂತಹ ಹಲವಾರು ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ಕಲಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಲು ಕಲಾ ಟ್ರಸ್ಟ್ ವೇದಿಕೆಗಳು ತುಂಬಾ ಸಹಕಾರಿಯಾಗಿವೆ ಎಂದರು.
ಜಾನಪದ ಜಾಗರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸುಗಮ ಸಂಗೀತ, ರಂಗ ಗೀತೆ, ಡೊಳ್ಳು ಕುಣಿತ, ಸಮೂಹ ನೃತ್ಯ, ಹಾಗೂ ಸಾಮಾಜಿಕ ನಾಟಕ ಸಂಸಾರದಲ್ಲಿ ಸ.ನಿ.ದ.ಪ ಪ್ರದರ್ಶನಗಳು ನೆರೆದಿದ್ದ ಸಾರ್ವಜನಿಕರಿಗೆ ನಗೆಗಡಲೆಯಲ್ಲಿ ತೇಲಿಸಿ, ಆಕರ್ಷಣೀಯವಾಗಿ ಪ್ರೇಕ್ಷಕರ ಮನಸೆಳೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ, ಗ್ರಾಮದ ಮುಖಂಡರಾದ ಸಿ.ಎಂ ನಾಗರಾಜ ಸ್ವಾಮಿ,ಎಸ್ ಎನ್ ವಿರುಪಾಕ್ಷಗೌಡ, ಎಸ್ ಎಂ. ಅಡಿವೆಯ್ಯಸ್ವಾಮಿ, ಹೂಗಾರ್ ಬಸವರಾಜ್, ಪ್ರಾ ಕೃ ಪ,ಸ,ಸಂ ಅಧ್ಯಕ್ಷ ಬಿ. ಸೋಮಶೇಖರಪ್ಪ, ಕುಂಬಾರ್ ಬಸವರಾಜ್, ವೈ.ಮಲ್ಲಿಕಾರ್ಜುನಗೌಡ, ಎಚ್. ತಿಪ್ಪೇಸ್ವಾಮಿ, ಕಲಾವಿದರಾದ ಎಸ್ ಆರ್. ಎಂ ಶರಣಬಸವರಾಜ ಸಿದ್ದರಾಂಪುರ, ತಬಲವಾದನ ಉಮೇಶ್ ಸಂಡೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ. ವೀಣಾ ಕುಮಾರಿ ಬಳ್ಳಾರಿ, ರಾಜಶೇಖರ್ ಸಿರಿಗೇರಿ, ಜಯಣ್ಣ ಬಳ್ಳಾರಿ, ಜೆ.ಯಂ ವಿಜಯಕುಮಾರ್, ಹಾಗೂ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಪದಾಧಿಕಾರಿಗಳು ಇದ್ದರು.






