ಸಿರಿಗೇರಿ ಸುದ್ದಿ ಮೇ 27
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಶ್ರೀರಾಮ ಮಂದಿರ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘ ಹಾಗೂ ಸಿರುಗುಪ್ಪ ತಾಲ್ಲೂಕಿನ ಬೂದುಗುಪ್ಪ ಗ್ರಾಮದ ಶ್ರೀಬಸವೇಶ್ವರ ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ, ಬಯಲಾಟ, ದೊಡ್ಡಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಗೋಪಾಲ ಜೀ ಕಲಾವಿದರನ್ನು ಸನ್ಮಾನಿಸಿ, ಕನ್ನಡ ನಾಡಿನ ಕಲೆಯನ್ನು ಶ್ರೀರಾಮನ ಸನ್ನಿಧಿಯಲ್ಲಿ ಪ್ರದರ್ಶಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸುರಭಿ ತಂಡ ನೃತ್ಯ ಪ್ರದರ್ಶನ, ಬೆಂಗಳೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಲಲಿತಾ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ, ಬೆಂಗಳೂರಿನ ಆರ್. ಅಮೃತವಾಣಿ ಭರತನಾಟ್ಯ ಪ್ರದರ್ಶನ ನೀಡಿದರು.
ಬಳ್ಳಾರಿ ಜಿಲ್ಲೆಯ ಕಲಾವಿದರ ‘ಶ್ರೀ ರೇಣುಕಾ ಮಹಾತ್ಮೆ’ ಬಯಲಾಟ ವಿಶೇಷ ಆಕರ್ಷಣೆಯಾಗಿತ್ತು. ಹಿರಿಯ ಕಲಾವಿದ ಶಂಕರಬಂಡೆ ಪೀರಸಾಬ್ ಎಮ್ಮಿಗನೂರು 50ನೇ ಬಾರಿಗೆ ಜಮದಗ್ನಿ ಪಾತ್ರ ನಿರ್ವಹಿಸಿ ದಾಖಲೆ ಬರೆದರು.
ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿಶ್ವನಾಥ ಸಾಹುಕಾರ,ಶ್ರೀರಾಮನ ಸನ್ನಿಧಿಯಲ್ಲಿ ನಮ್ಮ ನಾಡಿನ ಜನಪದ ಕಲೆಯನ್ನು ಪ್ರದರ್ಶಿಸುವ ಅವಕಾಶ ದೊರೆತದ್ದು ನಮ್ಮೆಲ್ಲರ ಸೌಭಾಗ್ಯ’ ಎಂದು ತಿಳಿಸಿದರು.






