ಬೆಂಗಳೂರು ; ಏಪ್ರಿಲ್ 27
ನಗರದ ನಾಗರಬಾವಿಯ ಎಸ್‌ಆರ್‌ಎಂ ಸ್ಟುಡಿಯೋದಲ್ಲಿ ವಿಕಲಚೇತನರ ಹಕ್ಕುಗಳ ಕುರಿತು ಜಾಗೃತಿ ಹಾಗು ವಿಕಲಚೇತನರ ಮಾಸಾಶನ ಹೆಚ್ಚಳ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ಪ್ರಯಾಣ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು
ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಉದ್ದೇಶದಿಂದ “ನಾನೊಬ್ಬ ವಿಕಲ ಚೇತನ” ಎಂಬ ಶೀರ್ಷಿಕೆಯ ಹಾಡನ್ನು ಸಿದ್ದಪಡಿಸಲಾಗುತ್ತಿದೆ.
ಹಾಡಿನ ಧ್ವನಿ ಮುದ್ರಣಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಚಾಲನೆ ನೀಡಿ ಮಾತನಾಡಿದ ಅವರು ವಿಕಲಚೇತನರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಅಸಡ್ಡೆ ಮಾಡುತ್ತಿದೆ ಕೇವಲ ಗ್ಯಾರಂಟಿ ಯೋಜನೆಗಳಿಗೆ ಒತ್ತು ನೀಡಿ ಚುನಾವಣೆ ಗೆಲ್ಲಲು ವೋಟ್ ಬ್ಯಾಂಕ್ ಗೆ ಬೆಲೆ ಕೊಟ್ಟು ವಿಕಲಚೇತನರ ಹಕ್ಕುಗಳ ಬಗ್ಗೆ ನಿರ್ಲ್ಯಕ್ಷತೆ ವಹಿಸಲಾಗಿದೆ ಮಹಾಂತೇಶ್ ಬ್ರಹ್ಮ ರವರ ಪ್ರಯತ್ನಕ್ಕೆ ನಮ್ಮ ಬೆಂಬಲವಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೂಡಲೇ ಅಂಗವಿಕಲರ ಬೇಡಿಕೆಗಳನ್ನು ಈಡೇರಿಸಲಿ ಎಂದು ಒತ್ತಾಯಿಸಿದರು.
ಹಿನ್ನೆಲೆ ಗಾಯಕ ಕಂಬದ ರಂಗಯ್ಯ ಧ್ವನಿ ನೀಡಿದ್ದು, ಎ.ಟಿ. ರವೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹಾಗೂ ಹಾಡಿನ ಸಾಹಿತ್ಯ ರಚಿಸಿರುವ ಮಹಾಂತೇಶ್ ಬ್ರಹ್ಮ ಅವರು ಮಾತನಾಡಿ ಕರ್ನಾಟಕ
ರಾಜ್ಯದಲ್ಲಿ ಸುಮಾರು 18 ಲಕ್ಷ ವಿಕಲಚೇತನರಿದ್ದು, ಅವರ ಜೀವನಮಟ್ಟ ಸುಧಾರಣೆಗಾಗಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಜೆಟ್‌ಗಳನ್ನು ಮಂಡಿಸಿದರೂ ವಿಕಲಚೇತನರ ಮಾಸಾಶನ ಹೆಚ್ಚಳ ಮಾಡದಿರುವುದು
ದುರದೃಷ್ಟಕರ ಎಂದು ವಿಷಾದಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದ್ದು, ವಿಕಲಚೇತನರಿಗೆ ಕೇವಲ ₹800 ಮಾತ್ರ ನೀಡಲಾಗುತ್ತಿದೆ. ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದರೆ ರಾಜ್ಯಾದ್ಯಂತ ಉಚಿತ ಪ್ರಯಾಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗು ಸಹ ಉಚಿತ ಸರ್ಕಾರಿ ಬಸ್ ಪ್ರಯಾಣ ಸೌಲಭ್ಯ ದೊರೆಯುತ್ತಿದೆಯಾದರೂ, ವಿಕಲಚೇತನರು ₹765 ಪಾವತಿಸಿ ಕೆಎಸ್‌ಆರ್‌ಟಿಸಿ ಬಸ್ ಪಾಸ್ ಪಡೆದುಕೊಂಡು ಕೇವಲ 100 ಕಿಲೋಮೀಟರ್ ವ್ಯಾಪ್ತಿಯೊಳಗೆ ಮಾತ್ರ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ
ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿದೆ ಆದರೆ ವಿಕಲಚೇತನರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಆಗದಿರುವುದು ಪ್ರಶ್ನಾರ್ಹವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಂತರ್ಜಾತಿ ವಿವಾಹಕ್ಕೆ ಸರ್ಕಾರ ₹3 ಲಕ್ಷ ಪ್ರೋತ್ಸಾಹಧನ ನೀಡುತ್ತಿರುವಾಗ, ವಿಕಲಚೇತನರ ವಿವಾಹಕ್ಕೆ ಕೇವಲ ₹50,000 ಮಾತ್ರ ನೀಡಲಾಗುತ್ತಿದ್ದು, ಇಬ್ಬರೂ ವಿಕಲಚೇತನರಾಗಿದ್ದರೆ ಯಾವುದೇ ಪ್ರೋತ್ಸಾಹಧನ ನೀಡದಿರುವುದು ಅನ್ಯಾಯಕರ ಎಂದು ಹೇಳಿದರು.
ಈ ಹಿನ್ನಲೆಯಲ್ಲಿ, ವಿಕಲಚೇತನರ ಹಕ್ಕುಗಳ ಪರವಾಗಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಲಾಗಿದ್ದು, “ನಾನೊಬ್ಬ ವಿಕಲ ಚೇತನ” ಗೀತೆಯ ಮೂಲಕ ಜನಜಾಗೃತಿ ಮೂಡಿಸಿ ಒಂದು ಲಕ್ಷ ಸಹಿ ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ ಎಂದು ಮಹಾಂತೇಶ್ ಬ್ರಹ್ಮ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರು ಮತ್ತು ತಂಡದ ಸದಸ್ಯರು, ಈ ಗೀತೆಯ ಮೂಲಕ ಸಮಾಜದಲ್ಲಿ ವಿಕಲಚೇತನರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಸರ್ಕಾರ ಗಮನ ಸೆಳೆಯುವ ಪ್ರಯತ್ನವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ನಟರಾದ ಹರ್ಷವರ್ಧನ್, ಛಾಯಾಗ್ರಾಹಕ ರವಿ ಹಾಗೂ ತಂಡದ ಸದಸ್ಯರಾದ ಮಂಜು (ಹಾಸನ), ಕೇರಳಪುರ ಮಹೇಶ್, ನಿಶಾಂತ್ ಹನುಮಂತರಾಜು ಸತೀಶ್ ವರದಿಗಾರರಾದ ಸಲ್ಮಾನ್ ಸೇರಿದಂತೆ ಅನೇಕರು ಇದ್ದರು.






