ರಾಜ್ಯ ಸರ್ಕಾರ ಬದುಕಿದೆಯೇ ಇಲ್ಲವೇ: ಡಾ.ಅಶ್ವತ್ಥನಾರಾಯಣ
ಬೆಂಗಳೂರು: ಸಿಕ್ಕಸಿಕ್ಕಿದ್ದಕ್ಕೆಲ್ಲ ತೆರಿಗೆ ಹಾಕಿ ಸಂಗ್ರಹಿಸುವ ಸರ್ಕಾರ ಜನರ ಬದುಕಿಗೆ ಯಾವುದೇ ಗ್ಯಾರಂಟಿ ನೀಡಿಲ್ಲ. ಬೆಂಗಳೂರು ನಗರದಲ್ಲಿ ಮಳೆ ಬಂದರೆ ಬದುಕುತ್ತೇನೆ ಎಂಬ ಭರವಸೆ ಇಲ್ಲದೇ ಭಯದಲ್ಲೇ ದಿನ ಕಳೆಯುವಂತೆ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಬದುಕಿದೆಯೇ ಇಲ್ಲವೇ ಗೊತ್ತಿಲ್ಲ. ಸರ್ಕಾರ ಎಲ್ಲ ರೀತಿಯಲ್ಲಿ ವಿಫಲವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಳೆ ಬಂದರೆ ಪ್ರತೀ ವರ್ಷ ನೂರಾರು ಸಮಸ್ಯೆ ನಗರದಲ್ಲಿ ಕಾಡಲಾರಂಭಿಸುತ್ತವೆ. ಆದರೆ ಒಂದೇ ಒಂದು ರೂಪಾಯಿ ಪರಿಹಾರ ಇಲ್ಲ. ಸತತ ಮಳೆಗೆ ಬೌರಿಂಗ್ ಆಸ್ಪತ್ರೆ ಸಮೀಪ ಕಾಪೌಂಡ್ ಕುಸಿದು ಏಳು ಜನ ಮೃತಪಟ್ಟರು. ನಿನ್ನೆ ಒಬ್ಬರು ಮೃತಪಟ್ಟಿದ್ದಾರೆ. ಇವೆಲ್ಲ ಲೆಕ್ಕಕ್ಕೆ ಸಿಕ್ಕ ಸಾವು. ಇನ್ನು ಗುಂಡಿಯಲ್ಲಿ ಬಿದ್ದು, ಮರದ ಕೊಂಬೆ ಬಿದ್ದು ಸತ್ತವರ ಲೆಕ್ಕ ಇಲ್ಲ. ಈ ಸರ್ಕಾರ ಜನರ ಸಾವಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.
ಮುಂಗಾರಿಗೆ ಮುಂಚೆ ನಗರದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ. ತಗ್ಗು ಪ್ರದೇಶಗಳಿಗ ನೀರು ನುಗ್ಗುತ್ತಲೇ ಇದೆ. ಮಾರತಹಳ್ಳಿ, ಸಿಲ್ಕ್ ಬೋರ್ಡ್, ಕೆ ಆರ್ ಸರ್ಕಲ್ ಜಂಕ್ಷನ್‍ಗಳು ಜಲಾವೃತವಾಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನವೇ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಮನೆ ತೆರಿಗೆ, ಘನತ್ಯಾಜ್ಯ ತೆರಿಗೆ, ವಿವಿಧ ಬಳಕೆ ಶುಲ್ಕ ಹೀಗೆ ಹಲವಾರು ತೆರಿಗೆಯನ್ನು ನಗರದ ಜನರ ಮೇಲೆ ಹಾಕಿ ಸಾವಿರಾರು ಕೋಟಿ ಸಂಗ್ರಹಿಸುವ ಸರ್ಕಾರ ಜನರಿಗಾಗಿ ಸೇವೆ ನೀಡುವುದು ಏನೂ ಇಲ್ಲ ಎಂದರು. ಮಳೆ ಬಂದರೆ ಇಡೀ ಬೆಂಗಳೂರು ಮುಳುಗುವಂತೆ ಸರ್ಕಾರ ಮಾಡಿದೆ. ಎಲ್ಲದಕ್ಕೂ ಕೈ ಚೆಲ್ಲಿ ಕುಳಿತಿರುವ ಸರ್ಕಾರಕ್ಕೆ ನಾವು ಪದೇ ಪದೇ ಹೇಳಿದರೂ ನಿರ್ಲಕ್ಷ್ಯ ಮಾಡುತ್ತಿದೆ. ಆದ್ದರಿಂದ ತಕ್ಷಣ ಕ್ರಮವಹಿಸಬೇಕು. ಇದಕ್ಕೆಲ್ಲ ಹಣ ಇದೆ. ನಗರ ಮತ್ತು ರಾಜ್ಯ ನಿರ್ವಹಣೆಯನ್ನು ಕಾಂಗ್ರೆಸ್ ಸರಿಯಾಗಿ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಇದು ಅವ್ಯವಸ್ಥೆಯ ಬೆಂಗಳೂರು..
ಜನರ ಕಾಳಜಿಗಿಂತ ಕುರ್ಚಿ ಕಚ್ಚಾಟವೇ ದೊಡ್ಡದಾಗಿದೆ. ಜನರ ಸಮಸ್ಯೆಯನ್ನು ಸಂಪೂರ್ಣವಾಗಿ ಮರೆತಿದೆ. ಬ್ರ್ಯಾಂಡ್ ಬೆಂಗಳೂರು ಕೇವಲ ಬ್ರ್ಯಾಂಡ್‍ಗೆ ಸೀಮಿತವಾಗಿದೆ. ಇದು ಅವ್ಯವಸ್ಥೆಯ ಬೆಂಗಳೂರು ಆಗಿದೆ ಎಂದರು. ಇನ್ನೂ ಮಳೆ ಆರ್ಭಟ ಶೂರುವಾಗಿಲ್ಲ. ಸ್ವಲ್ಪ ಮಳೆಗೇ ಈ ರೀತಿ ಆಗಿದೆ. ಮಳೆ ಮುಂಚೆ ಮುನ್ನೆಚ್ಚರಿಕೆ ಕ್ರಮ ಜಾರಿ ಮಾಡಬೇಕು. ಅದಿಲ್ಲದಿದ್ದರೆ ಕೇವಲ ತೆರಿಗೆ ಸಂಗ್ರಹ ಮಾಡಿ ಏನು ಪ್ರಯೋಜನ. ಬೆಸ್ಕಾಂನಿಂದ, ಜಲಮಂಡಳಿಯಿಂದ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಬರುತ್ತಿದೆ. ಆದರೆ ಇದನ್ನು ಸದುಪಯೋಗ ಮಾಡುತ್ತಿಲ್ಲ ಎಂದು ಹೇಳಿದರು.
ನೂರಾರು ತೆರಿಗೆ ಹಾಕಿ ಸರ್ಕಾರದಿಂದ ದರೋಡೆ
ನೂರಾರು ತೆರಿಗೆ ಹಾಕಿ ಸರ್ಕಾರ ದರೋಡೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇದನ್ನೆಲ್ಲ ನೋಡುವ ಭಾಗ್ಯ ನಮ್ಮದಾಗಿದೆ. ಎಲ್ಲದಕ್ಕೂ ಸೆಸ್ ಆಗಿ ಮೂಲಸೌಕರ್ಯಕ್ಕೆ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಏನೂ ಅಭಿವೃದ್ಧಿ ಇಲ್ಲ ಎಂದು ವ್ಯಂಗ್ಯವಾಡಿದರು. ರಾಜ್ಯ ಸರ್ಕಾರಕ್ಕೆ ಜನರ ಜೀವದ ಬಗ್ಗೆ ಎಳ್ಳಷ್ಟೂ ಕನಿಕರ ಇಲ್ಲ. ಸರ್ಕಾರ ಬಂದಾಗಿನಿಂದ ಮಳೆನೀರು ಮತ್ತು ಕಣ್ಣೀರನ್ನೇ ಕಾಣುತ್ತಿದ್ದೇವೆ. ನೆಮ್ಮದಿಯಾಗಿ ಬದುಕುವಂತೆಯೇ ಇಲ್ಲ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಇದ್ದರು.






