ಸಿರಿಗೇರಿ ಮೇ,27: ಮಾಧ್ಯಮ ರಂಗ ಎಂಬುದು ಬರೀ ಬರವಣಿಗೆಗೆ ಮಾತ್ರ ಸೀಮಿತವಲ್ಲ. ಅದು ಇಡೀ ಸಮಾಜದ ಬದಲಾವಣೆಯನ್ನೇ ಬಯಸುತ್ತದೆ ಎಂದು ಎಸ್ ಸಿ, ಎಸ್ ಟಿ, ಅಲೆಮಾರಿ ಸಮುದಾಯದ ಅಧ್ಯಕ್ಷೆ ಪಲ್ಲವಿ ತಿಳಿಸಿದರು.
ಅವರು ಇಲ್ಲಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಿರಿಗೇರಿ ಯರಿಸ್ವಾಮಿಯವರ ಅನ್ನಪೂರ್ಣ ಪ್ರಕಾಶನ ಸಂಸ್ಥೆಯಿಂದ ಕೊಡಗಿನ ಶಕ್ತಿ ಪತ್ರಿಕೆಯ ಸಂಸ್ಥಾಪಕ ಅನಂತಶಯನ ಇವರಿಗೆ ಕೊಡ ಮಾಡಲ್ಪಡುವ ಪಿ. ಲಂಕೇಶ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಶಾಸಕಾಂಗ,ಕಾರ್ಯಾಂಗ,
ನ್ಯಾಯಾಂಗದ ಆಗು
ಹೋಗುಗಳನ್ನು ಗಮನಿಸಿ, ವಾಸ್ತವತೆ ಮತ್ತು ಬದ್ಧತೆಯಿಂದ ನಿಷ್ಟೂರವಾದಿಯಾಗಿ
ಬರೆಯುವುದು ಅಷ್ಟು ಸುಲಭದ ಮಾತಲ್ಲ.
ಆದಾಗ್ಯೂ ಸಹ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬದಿಗಿಟ್ಟು ಹೋರಾಡುತ್ತಿರುವ ಪತ್ರಕರ್ತರ ವೃತ್ತಿ ಶ್ಲಾಘನೀಯ. ಟಿವಿ ಮಾಧ್ಯಮ ಹಾಗೂ ಮೊಬೈಲ್ ಜಾಲತಾಣಗಳು ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಹಿಂಸಾಚಾರ, ಅತ್ಯಾಚಾರ ಸೇರಿದಂತೆ ಎಲ್ಲಾ ವಿಧದ ಕ್ರೈಮ್ ಗಳನ್ನು ಪದೇ ಪದೇ ಬಿತ್ತರಿಸಿ ಮಹಿಳೆಯರ ಮಾನ ಹರಾಜು ಹಾಕುತ್ತಿವೆ. ಆದರೆ ಪತ್ರಕರ್ತರು ನೈಜ ಸ್ವರೂಪದ ವರದಿಯನ್ನು ಲೇಖನಿಯಿಂದ ಬರೆಯುವ ಮೂಲಕ ಜನಮಾನಸದಲ್ಲಿ ಉಳಿದುಕೊಳ್ಳುತ್ತಾರೆ ಎಂದರು. ಪಿ. ಲಂಕೇಶ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಕ್ತಿ ಪತ್ರಿಕೆಯ ಅನಂತಶಯನ ಕೊಡಗು ಪ್ರದೇಶದಲ್ಲಿ ಸಾಹಿತ್ಯದ ಗಂಧ ಗಾಳಿಯೇ ಗೊತ್ತಿಲ್ಲ.
ಅಂತಹ ಪ್ರದೇಶದಲ್ಲಿ ಹಲವು ದಶಕಗಳ ಹಿಂದೆ ಬಿಳಿ ಕಪ್ಪು ವರ್ಣಿತ ಪತ್ರಿಕೆ ಶಕ್ತಿ ಪತ್ರಿಕೆಯನ್ನು ಹೊರತಂದಿದ್ದು ಸಾಮಾನ್ಯವಲ್ಲ. ಅಂದಿನ ಕಾಲಘಟ್ಟದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಮುಚ್ಚುವ ಸ್ಥಿತಿಗೆ ಒದಗಿತ್ತು. ಆ ಸಂದರ್ಭದಲ್ಲಿ ಸರ್ಕಾರದ ಆಶ್ರಯದಲ್ಲಿ ಬೆಳೆಯಬೇಕಾದ ಸ್ಥಿತಿ ಒದಗಿತು. ಇತ್ತೀಚಿನ ವಿದ್ಯಮಾನ ನೋಡಿದರೆ ಮೊಬೈಲ್ ಪ್ರಪಂಚ ಹೆಚ್ಚಾಗಿ ಬೆಳೆದಿದೆ. ಪತ್ರಿಕೋದ್ಯಮ ನಡೆಸುವುದೇ ಕಷ್ಟದಾಯಕವಾಗಿದೆ. ಇದಕ್ಕೆ ಮೂಲ ದಾರಿ ಜಾಹೀರಾತುಗಳು ಇಲ್ಲದೆ ಬದುಕಲಾರವು ಎಂಬ ಸ್ಥಿತಿಗೆ ಬಂದು ಒದಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಆನಂತರ ಪ್ರಸ್ತಾವಿಕವಾಗಿ ಅನ್ನಪೂರ್ಣ ಪ್ರಕಾಶನ ಸಂಸ್ಥೆಯ ಸಿರಿಗೇರಿ ಯರಿಸ್ವಾಮಿ ಮಾತನಾಡಿದರು.
ಇದೆ ವೇಳೆ ಅನಂತಶಯನ ಇವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ದೇವಸ್ಥಾನದ ಧರ್ಮ ಅಧಿಕಾರಿ ಹೂಗಾರ್ ಬಸವರಾಜ, ತೆಕ್ಕಲಕೋಟೆ ವೃತ್ತ ನಿರೀಕ್ಷಕ ಚಂದನ್ ಗೋಪಾಲ್,ಸಿರಿಗೇರಿ ಪಿಎಸ್ಐ ಶಶಿಧರ ನಾಯಕ್, ಶಾನವಾಸಪುರ ಶಾಂತನಗೌಡ,ಬಿ. ಈರಯ್ಯ, ರಮೇಶ್ ಭಜಂತ್ರಿ, ಗೋಪಾಲಪ್ಪ ಪತ್ರಿಕಾ ಮಾಧ್ಯಮದವರು, ಸಾರ್ವಜನಿಕರು ಸೇರಿದಂತೆ ಇತರರು ಇದ್ದರು.






