ವರದಿ ಎನ್. ರಾಜಕುಮಾರ್
ಸಿರಿಗೇರಿ ಆಗಸ್ಟ್ 19 : ಇಲ್ಲಿನ ಗ್ರಾಮ ಪಂಚಾಯಿತಿಯ ಆಡಳಿತದ ವ್ಯವಸ್ಥೆಯಲ್ಲಿರುವ ಗ್ರಂಥಾಲಯದ ಅರಿವು ಕೇಂದ್ರ ವಿನಾಶದತ್ತ ದಾಪುಗಾಲು ಇಟ್ಟಿದೆ.
ಸಮಸ್ಯೆ :
ಈ ಹಿಂದೆ ಬೀಳು ಬಿದ್ದ ಕೊಠಡಿಯಲ್ಲಿ ಇಲಿ ಹೆಗ್ಗಣಗಳ ಕಾಟ ದೊಂದಿಗೆ ಪುಸ್ತಕಗಳು ಮೂಲೆಗುಂಪಾಗಿದ್ದವು. ಶಿಥಿಲಾವಸ್ತೆಗೊಂಡ ಕೊಠಡಿ ಮೇಲ್ಚಾವಣಿ ಅಭಿವೃದ್ಧಿ ಕಾಣದೆ ಮಳೆ ನೀರು ಸುರಿದು ಪುಸ್ತಕದ ಭಂಡಾರ ಕೊಳೆತು ನಾರುತ್ತಿತ್ತು. ಪರಿಣಾಮ ನಾನಾ ರೀತಿಯ ಗ್ರಂಥಗಳು, ದಿನವಹಿ ಪತ್ರಿಕೆಗಳು ಹಾಳಾಗಿ ಓದುಗರ ಕೈಗೆ ಎಟುಕುತ್ತಿರಲಿಲ್ಲ. ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಕಳೆದ ಆರು ವರ್ಷಗಳ ಹಿಂದೆ ಮುಖ್ಯ ರಸ್ತೆಯ ಎಸ್ಬಿಐ ಬ್ಯಾಂಕ್ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಲಕ್ಷಾಂತರ ರೂಪಾಯಿ ಅನುದಾನದ ಅರಿವು ಕೇಂದ್ರ ನಿರ್ಮಾಣಗೊಳಿಸಿತು.

ಗ್ರಂಥಾಲಯಕ್ಕೆ ಬೇಕಾದ ಪೀಠೋಪಕರಣ, ವಿದ್ಯುತ್ ಸೌಕರ್ಯ, ಕಂಪ್ಯೂಟರ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಕಲ್ಪಿಸಿತು. ಆದರೆ ಗ್ರಾಮ ಪಂಚಾಯಿತಿ ನೀಡಿದ್ದ ವಸ್ತುಗಳು ಬಹುತೇಕ ಮಾಯವಾಗಿವೆ. ಅತ್ಯಂತ ಎತ್ತರವಾಗಿ ಬೆಳೆದಿದ್ದ ಗಿಡಗಳು ಕೊಡಲಿಯ ಪೆಟ್ಟಿಗೆ ಬಿದ್ದು, ಕಟ್ಟಿಗೆಗಳು ಗ್ರಂಥಪಾಲಕರ ಮನೆ ಸೇರಿಕೊಂಡಿವೆ. ಇನ್ನು ಓದುಗರು ಕುಡಿಯುವ ನೀರಿನ ಸಲುವಾಗಿ ಹರಸಾಹಸ ಪಡಬೇಕಾಗಿದೆ.
ಶೌಚಾಲಯವಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಗಿಡಗಳಿಗೆ ಹಾಗೂ ಶೌಚಾಲಯಕ್ಕೆ ಒದಗಿಸುವ ನೀರು ಗ್ರಂಥಾಲಯಕ್ಕೆ ಅಂಟಿಕೊಂಡಿರುವ ಡಾಬ ಕ್ಕೆ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ಗ್ರಂಥಾಲಯದ ಮುಂಭಾಗದಲ್ಲಿ ಆವರಣದಲ್ಲಿ ಕಸದ ರಾಶಿಯನ್ನು ತೆರವುಗೊಳಿಸುವಂತೆ ಗ್ರಂಥಪಾಲಕರು ಹಾಗೂ ಗ್ರಾಮ ಆಡಳಿತಕ್ಕೆ ನಾನಾ ಬಾರಿ ಮನವಿ ಪತ್ರ ಸಲ್ಲಿಸಿ ಸ್ವಚ್ಛತೆ ಗೊಳಿಸುವಂತೆ ನೀಡಿದ ಮನವಿ ಪತ್ರ ಮೂಲೆಗುಂಪಾಗಿದೆ. ಬೇಸತ್ತ ಸಿರಿಗೇರಿ ಗ್ರಾಮದ ಓದುಗರು ಸ್ವಯಂ ಪ್ರೇರಿತರಾಗಿ ತಾವೇ ನಾನಾ ಬಾರಿ ಸ್ವಚ್ಛಗೊಳಿಸಿ ಪರಿಸರವನ್ನು ಕಾಪಾಡಿದ್ದಾರೆ.
ಇಲ್ಲಿನ ಗ್ರಂಥ ಪಾಲಕರಾದ ಮಹಾದೇವಯ್ಯ ಸ್ವಾಮಿ ತಾನೊಬ್ಬ ಗ್ರಂಥಪಾಲಕ ಎಂಬುದನ್ನು ಮರೆತು ಗ್ರಂಥಾಲಯದ ಶಿಸ್ತು ಸಂಯಮ ಗಾಳಿಗೆ ತೂರಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಓದುಗರಿಗೆ ಸಹಕರಿಸುತ್ತಿಲ್ಲ ಎಂದು ಓದುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವರನ್ನು ಕೂಡಲೇ ಬೇರೆ ಕಡೆಗೆ ವರ್ಗಾಯಿಸಿ ಮತ್ತೊಬ್ಬರು ನೇಮಿಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.
ಕಂಪ್ಯೂಟರ್ ಕೆಟ್ಟು ಹೋಗಿ ಹಲವಾರು ವರ್ಷಗಳೇ ಕಳೆದಿವೆ. ಮಕ್ಕಳ ಆಟಕ್ಕೆ ಬೇಕಾದ ಸಾಮಗ್ರಿಗಳಿಲ್ಲ. ಇನ್ನು ಕೇರಮ್ ವ್ಯವಸ್ಥೆಯನ್ನು ಓದುಗರು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಂಥಪಾಲಕರೇ ತೆಗೆದುಕೊಂಡು ಹೋಗಿದ್ದಾರೆ. ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಓದುಗರ ಒಕ್ಕೂಟದಿಂದ ಗ್ರಾಪಂ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಗ್ರಂಥಪಾಲಕರ ಸಮಿತಿಯ ಸದಸ್ಯ ಎನ್ ರಾಜಕುಮಾರ, ಓದುಗರಾದ ಕಲ್ಗುಡಿ ಚಂದ್ರಶೇಖರ, ದೊಡ್ಡ ಈರಣ್ಣ ಹೆಚ್, ಚಲವಾದಿ ನಾಗರಾಜ, ರಾರಾವಿ ಚನ್ನಪ್ಪ, ಚಲವಾದಿ ಗಾದಿಲಿಂಗ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಹೇಳಿಕೆ :
ಗ್ರಂಥಾಲಯದ ಓದುಗರು ಹಲವಾರು ಬೇಡಿಕೆಗಳ ಬಗ್ಗೆ ಮನವಿ ಪತ್ರ ನೀಡಿರುವುದನ್ನು ಗಮನಿಸಿದ್ದೇನೆ. ಸದ್ಯದಲ್ಲಿ ಕಂಪ್ಯೂಟರ್ ರಿಪೇರಿ, ಶೌಚಾಲಯ ಸಿಂಟೆಕ್ಸ್, ನೀರಿಗಾಗಿ ಮೋಟಾರ್ ವ್ಯವಸ್ಥೆ ಕಲ್ಪಿಸುತ್ತೇವೆ.
ಹುಸೇನ್ ಪೀರಸಾಬ್. ಪಿಡಿಒ. ಗ್ರಾಪಂ ಸಿರಿಗೇರಿ.
ಹೇಳಿಕೆ :
ಇಲ್ಲಿನ ಗ್ರಂಥಾಲಯದ ಮೇಲ್ವಿಚಾರಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ನಾನಾ ಬಾರಿ ಮನವಿ ನೀಡಲಾಗಿದೆ. ಪಿಡಿಓ, ಕಾರ್ಯದರ್ಶಿಗಳು ಭೇಟಿ ನೀಡಿದ್ದರು ಯಾವುದೇ ರೀತಿ ಪ್ರಯೋಜನವಾಗಿಲ್ಲ. ಮೇಲ್ವಿಚಾರಕರ ಮೇಲೆ ಶಿಸ್ತು ಕ್ರಮ ಜರುಗಿಸುವಿದ್ದಲ್ಲಿ ಹೋರಾಟ ಅನಿವಾರ್ಯ.
ಕಲ್ಗುಡಿ ಚಂದ್ರಶೇಖರ. ಓದುಗರು ಸಿರಿಗೇರಿ.






